Wednesday 10 September, 2008

ನಿನ್ನದೇ ನೀರಿಕ್ಷೆಯಲ್ಲಿ,,,,,




ಚಿಗುರೆಗಂಗಳ ಚೆಲುವೆ ,
ತುಂಬಾ ದಿನಗಳ ನಂತರ ಬರೀತಾ ಇದ್ದೀನಿ ಕಣೆ, ಮತ್ತೇನು ಕಾರಣ ಅಂತ ಕೇಳಬೇಕಾಗಿಲ್ಲ ತಾನೆ, ಇನ್ನೇನು ಇರುತ್ತೆ ನನ್ನಂಥವನಿಗೆ ನಿನ್ನದೇ ಧ್ಯಾನ ಬಿಟ್ಟರೆ. ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ನನ್ನ ಮನಸ್ಸಿನಲ್ಲಿ ನಿನ್ನದೇ ನೆನಪುಗ ಜಡಿ ಮಳೆ ಹಿಡಿದು ಬಿಟ್ಟಿದೆ. ಹೊರಗೆ ಸುರಿವ ಮಳೆ ಇಳೆಯ ಕೊಳೆಯನೆಲ್ಲ ತೊಳೆದು ನವ ವದುವಿನಂತೆ ಕಂಗೊಳಿಸುವಂತೆ ಮಾಡಿದ್ದರೆ, ನಿನ್ನ ಮಧುರ ನೆನಪುಗಳು ನನ್ನೀ ಮನದಲ್ಲಿ ಬೆಚ್ಚನೆಯ ಭಾವ ತಂದಿಟ್ಟುಈ ಜಗತ್ತಿಗೆ ಹೊಸ ಪ್ರೇಮ ಕಾವ್ಯ ಬರೆಯುವಂತೆ ಕಾಡುತ್ತಿವೆ.



ಪ್ರತೀ ಸಾರಿ ನನ್ನ ನಾ ಕನ್ನಡಿಯಲ್ಲಿ ನೋಡಿಕೊಂಡಾಗಲು ಆ ಬ್ರಹ್ಮನನ್ನು ಬೈದುಕೊಳ್ಳುತಿದ್ದ ನಾನು, ಮೊದಲ ಸಲ ಬ್ರಹ್ಮನ ಸೃಷ್ಟಿ ಇಷ್ಟು ಅದ್ಬುತವಾಗಿರುತ್ತದೆಂದು ತಿಳದದ್ದು ತುಂತುರು ಮಳೆಯ ಹನಿಯಲ್ಲಿ ನೆನೆಯುತ್ತಾ ಹಾಡನ್ನು ಗುನುಗುತ್ತಿದ್ದ ನಿನ್ನ ನೋಡಿದಾಗಲೇ. ಕಲಾವಿದ ತನ್ನ ಮಹಾತ್ವಾಕಾಂಕ್ಷೆಯ ಚಿತ್ರ ಬರೆಯುವಂತೆ ನಿನ್ನ ಅದೆಸ್ಟು ನಾಜೂಕಾಗಿ ತಿದ್ದಿ ತೀಡಿ ಧರೆಗಿಳಿಸಿದ್ದಾನೆ. ನಿನ್ನ ಕಂಡ ಆ ಕ್ಷಣದಿಂದ ಬ್ರಹ್ಮನ ಮೇಲಿದ್ದ ಕೋಪ ಮಂಜಿನಂತೆ ಕರಗಿ ಹೋಯಿತು. ನಿಜಕ್ಕೂ ಅವತ್ತಿಂದ ಅವನು ನನ್ನ ಆರಾಧ್ಯ ದೈವವಾಗಿ ಬಿಟ್ಟಿದ್ದಾನೆ.



ನೈದಿಲೆಯೇ ಕಣ್ಣಾಯಿತೋ
ಲತೆಯೊಂದು ನಡುವಾಯಿತೋ
ಬೆಳದಿಂಗಳೇ ಹೆಣ್ನಾಯಿತೋ .
ಏನೆಂದು ವರ್ಣಿಸಲಿ ನಿನ್ನ
ಹೇಳೇ ನನ್ನ ಚಿನ್ನ.



ಸರ್ವ ಸಂಗ ಪರಿತ್ಯಾಗಿಯಾಗಲು ಹೊರಟವನಿಗೆ ನೀನೆ ಸರ್ವಸ್ವ ಎನ್ನಿಸುವಂತೆ ಮಾಡಿದೆ. ಅದೇನು ಮೋಡಿ ಅಡಗಿದೆ ಆ ನಿನ್ನ ಕಂಗಳಲ್ಲಿ .ಹುಣ್ಣಿಮೆ ಚಂದ್ರನ ಬೆಳಕಿಗೆ ಸಮುದ್ರದ ಅಲೆಗಳು ಭೋರ್ಗರೆಯುವಂತೆ , ನನ್ನ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಸುಪ್ತ ಭಾವನೆಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಬಿರುಗಾಳಿಯಂತೆ ಅಲೆದು ಕೊಂಡಿದವನು ನಾನು, ಎಲ್ಲರು ಇಷ್ಟ ಪಡುವ ತಂಗಾಳಿಯಗಿಸಿದೆಯಲ್ಲ ಎಲ್ಲಿತ್ತೆ ನಿನ್ನಲ್ಲಿ ಆ ಮಾಯಾ ಶಕ್ತಿ.



ಅದೇಕೆ ಇದ್ದಕಿದ್ದ ಹಾಗೆ ನನ್ನ ಒಬ್ಬನ್ನನ್ನೇ ಒಬ್ಬಂಟಿಯಾಗಿ ಬಿಟ್ಟು ದೂರ ಹೋದೆ. ನಾ ಮಾಡಿದ ತಪ್ಪಾದರೂ ಏನು? ನನ್ನ ಬಾಳಿನ ಬೆಳಕಾಗುವೆಯ ಎಂದು ಕೇಳಿದ್ದೆ ತಪ್ಪಯಿತಾ?. ಅಂದು ದೂರ ಸರಿದು ಹೋದವಳು ಇನ್ನು ಹಿಂತಿರುಗಿ ಬರಲಿಲ್ಲ. ಆದರು ನಿನಾಗಾಗೆ ಕಾಯುತ್ತಿದ್ದೇನೆ ನೀ ಬರುವ ಹಾದಿಯಲ್ಲಿ ನಿನ್ನದೇ ನೀರಿಕ್ಷೆಯಲ್ಲಿ..... ಹಿಡಿ ಎಷ್ಟು ಹೃದಯದಲ್ಲಿ ಸಾಗರದಸ್ಟು ಪ್ರೀತಿ ತುಂಬಿ ನಿನಾಗಾಗೆ ಕಾದಿದ್ದೇನೆ....

ಎಂದೆಂದೂ ನಿನ್ನವ......